‘ಬದಲಾವಣೆಯತ್ತ ಯುವ ಜನತೆಯ ಚಿತ್ತ’

    ‘ಅಭಿವೃದ್ಧಿ’ ಕೇಂದ್ರಿತ ಕಾರ್ಯಕ್ರಮವೊಂದರಲ್ಲಿ ತೋರಿಸಿದ ಕಿರುಚಿತ್ರದ ನೆನಪು ಬರುತ್ತಿದೆ. ಒಬ್ಬ ಯುವಕ ತನ್ನ ಊರನ್ನ ತೊರೆದು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿರುತ್ತಾನೆ. ಹಲವು ವರ್ಷಗಳ ನಂತರ ಉನ್ನತ ಹುದ್ದೆ ಪಡೆದು ಊರನ್ನು ನೆನಪಿಸಿಕೊಂಡು, ತನ್ನ ಕುಟುಂಬದವರನ್ನು ಭೇಟಿ ಮಾಡಲು ಬರುತ್ತಾನೆ. ತನ್ನವರನ್ನು ಭೇಟಿ  ಮಾಡಿ ನಂತರ ಪುನಃ ವಿದೇಶಕ್ಕೆ ವಾಸಾಸಾಗುವುದು ಅವನ ಪ್ಲಾನ್.

ತನ್ನ ಊರಿಗೆ ಬಂದಾಗ ಅಲ್ಲಿ ಜನರ ಸಂಕಷ್ಟ ನೋಡಿ ಏನಾದರೂ ಮಾಡಬೇಕು ಅನ್ನಿಸುತ್ತದೆ. ಜನ ಕುಡಿಯುವ ನೀರಿಗಾಗಿ, ವಿದ್ಯುತ್ ಸೌಲಭ್ಯಕ್ಕಾಗಿ ಪರದಾಡುತ್ತಿದ್ದರು. ಆದ್ದರಿಂದ ಮೊದಲು ಜನರಲ್ಲಿ ಜಾಗೃತಿ ಮೂಡಿಸುತ್ತಾ ಎಲ್ಲಾ ಸಮುದಾಯದವರನ್ನು ಒಟ್ಟುಗೂಡಿಸುತ್ತಾನೆ. ತನ್ನ ಗ್ರಾಮದ ಅಂಚಿನಲ್ಲಿ ಒಂದು ತೊರೆ ಹರಿಯುತ್ತಿದ್ದು, ಅದರ ನೀರಿನ ಬಳಕೆಗಾಗಿ ಕಿರು ಅಣೆಕಟ್ಟು ನಿರ್ಮಿಸಲು ಜನ ಬೆಂಬಲಕೋರುತ್ತಾನೆ.

ಜನರ ಸಹಕಾರದಿಂದ ತೊರೆಗೆ ಅಣೆಕಟ್ಟು ಕಟ್ಟಿ ನೀರನ್ನು ವಿದ್ಯುತ್ ಶಕ್ತಿ ತಯಾರಿಸಲು ಬಳಸುವ ಕಾರ್ಯ ಸಂಪೂರ್ಣಗೊಳಿಸುತ್ತಾನೆ. ಇದೊಂದು ಹಳ್ಳಿಯಲ್ಲಿ ಬದಲಾವಣೆಯ ಕಿಡಿ ಹತ್ತಿಸಿದ ಯುವಕನ ಕಿರು ಚಿತ್ರ. ಅವನು ನಂತರ ವಿದೇಶಕ್ಕೆ ಹೋಗದೆ ತನ್ನ ಗ್ರಾಮದಲ್ಲೇ ಉಳಿದುಕೊಳ್ಳುತ್ತಾನೆ.

ಯುವ ಜನತೆಯಲ್ಲಿ ಬದಲಾವಣೆಯೆಂಬ ಹವ ಯಾವಾಗಲೂ ಜೀವಂತ. ಮೇಲೆ ತಿಳಿಸಿರುವ ಕಥೆಯಂತೆ ಹಲವಾರು ಯುವ ಜನತೆಯ ನಿದರ್ಶನಗಳು ನಮ್ಮ ನಡುವೆ ಇವೆ. ಮುರ್ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಯುವ ಜನರೆಲ್ಲಾ ಜೊತೆ ಸೇರಿ ರಾಜಕೀಯ ಕ್ರಾಂತಿಯನ್ನು ಮಾಡಿದ್ದರು. ಬದಲಾವಣೆಯ ಗಾಳಿ ದೆಹಲಿಯಲ್ಲಿ ಬೀಸಿ ರಾಜಕೀಯವಾಗಿ ಗುರುತಿಲ್ಲದ ಪಕ್ಷವೊಂದು ಅಧಿಕಾರಕ್ಕೆ ಬಂತ್ತು.

ಯುವ ಜನರು ನಡೆ, ನುಡಿ, ಆಚಾರ- ವಿಚಾರಗಳಲ್ಲಿ ಮಾತ್ರ ಬದಲಾವಣೆ ಬಯಸುತ್ತಾರೆ. ಅವರು ಪಾರಂಪರಿಕವಾದವುಗಳಿಗೆ, ನೀತಿ-ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎನ್ನುವ ಸಾಮನ್ಯ ತಪ್ಪು ಗ್ರಹಿಕೆ ಎಲ್ಲರಲ್ಲೂ ಇದೆ. ಯುವಜನರು ಬದಲಾವಣೆ ಅರಸುತ್ತಾರೆ. ಸಮಾಜದಲ್ಲಿ ಬೇರೂರಿರುವ ಸಾಮಾಜಿಕ ಅನ್ಯಾಯ, ಅನೀತಿಗಳ ವಿರುದ್ಧ ಸಿಡಿದೇಳುವ ಬದಲಾವಣೆ ತರುವ ಕಿಚ್ಚು ಸಹ ಯುವಜನತೆಯ ಹೃದಯದಲ್ಲಿದೆ. ಯುವಜನರು ಸಂಘಟಿತರಾಗಿ ಸಮಾಜ-ಮುಖಿಯಾಗಿರುವ ಚಟುವಟಿಕೆಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡರೆ ಅದ್ಭುತಗಳೇ ನಡೆದುಹೋಗುತ್ತದೆ. ಈಜಿಪ್ಟ್ ದೇಶದಲ್ಲಿ ಬ್ರಷ್ಟಾಚಾರದ ವಿರುದ್ಧ ದಂಗೆಯೆದ್ದು ಆಡಳಿತ ನಡೆಸುತ್ತಿದ್ದವರನ್ನು ಕಿತ್ತು ಹಾಕಿದ್ದು ಯುವಜನ ಕ್ರಾಂತಿ. ಈ ಕ್ರಾಂತಿ ಉಳಿದ ಅರಬ್ ದೇಶಗಳಿಗೆ ಹಬ್ಬಿಕೊಂಡು ‘ಅರಬ್ ಸ್ಪ್ರಿಂಗ್’ ಎಂದು ಹೆಸರಾಯಿತು.    

ಬದಲಾವಣೆಯತ್ತ ಯುವ ಜನತೆಯಲ್ಲಿರುವ ಅಗಾಧ ಶಕ್ತಿಯನ್ನು ಅರಿತ ಭಾರತದ ಇಂದಿನ ಪ್ರಧಾನಿಯವರು ತಮ್ಮ ಎಲ್ಲಾ ಯೋಜನೆಗಳಿಗೆ ಯುವಜನರ ಬೆಂಬಲಕೋರಿದ್ದಾರೆ. ಸ್ವಚ್ಚ ಭಾರತ ಯೋಜನೆ, ಮೇಕ್  ಇಂಡಿಯಾ, ಡಿಜಿಟಲ್ ಇಂಡಿಯಾ ಎಲ್ಲಾದರ ಯಶಸ್ಸು ಯುವಜನತೆಯ ಮೇಲೆ ಅವಲಂಭಿಸಿದೆ. ಭಾರತದ ಕಾರ್ಯಕ್ರಮಗಳಿಗೆ ಯುವ ದೃಷ್ಟಿಕೋನ ಬೇಕು ಎಂದು ಎಲ್ಲರಿಗೂ ಅರಿವಿದೆ. ಯುವಜನರು ಬೆರೆತ ಕಾರ್ಯಗಳಲ್ಲಿ ಅಗಾಧ ಶಕ್ತಿ ಇದೆ. ಸಮಾಜದಲ್ಲಿ ಯುವ ಕೈಗಳು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನೇ ತೊಡಗಿಸಿ ಕೊಳ್ಳಬೇಕು. ಯುವ ಮುಖ ಹೊಂದಿರುವ ಯೋಜನೆಗಳು ಯಶಸ್ಸು ಕಾಣುತ್ತದೆ.

ಯುವ ಜನರು ಆಧ್ಯಾತ್ಮ ಮತ್ತು ಅನುಭವವನ್ನು ನಿರ್ಲಕ್ಷಿಸುತ್ತಾರೆ ಎನ್ನುವುದು ಇನ್ನೊಂದು ಅಪಾದನೆ. ಆದರೆ ಯುವ ಜನರಿಗೆ ಆಧ್ಯಾತ್ಮದೆಡೆಗೆ ಇರುವ ಒಲವು ಅಗಾಧ ಎಂದು ತಿಳಿದುಕೊಳ್ಳಬೇಕು. ಯುವಕನೊಬ್ಬ ಯೇಸು ಸ್ವಾಮಿಯನ್ನು, ‘ಸ್ವರ್ಗ ಸಾಮ್ರಾಜ್ಯ ಪ್ರವೇಶಿಸಬೇಕಾದರೆ ನಾನೇನು ಮಾಡಬೇಕು?’ ಎಂದು ಕೇಳಿಕೊಂಡು ಬಂದಿರುವುದು ಇದಕ್ಕೆ ಸಾಕ್ಷಿ. ನಮ್ಮ ದೇವಾಲಯಗಳಲ್ಲಿ ಯುವ ಜನರ ಸಂಖ್ಯೆಯು ಗಮನಾರ್ಹವಾಗಿ ಕಂಡು ಬರುತ್ತದೆ. ಧರ್ಮಕೇಂದ್ರಗಳಲ್ಲಿ ವಿವಿಧ ಸಂಘಟನೆಗಳಲ್ಲಿ ಯುವ ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಬಹುಶಃ ತಮ್ಮ ಬಾಲ್ಯದಲ್ಲಿ ತಂದೆ-ತಾಯಿಯರಿಂದ ಪಡೆದ ಭಕ್ತಿ, ವಿಶ್ವಾಸವನ್ನು ಬೆಳೆಸುವ ಹುಮ್ಮನಸ್ಸು ಜೀವಂತವಾಗಿಸಿದ್ದಾರೆ.

ಯುವ ಜನತೆಯ ಬದಲಾವಣೆಯ ಆಶಯ ಸಕಾರವಾಗಬೇಕಾದರೆ ಹಿರಿಯರ ಅನುಭವದ ಮಾರ್ಗದರ್ಶನ ಅಗತ್ಯವೆಂಬುದು ಸತ್ಯ. ಆದ್ದರಿಂದ ‘ಅನುಭವ ಅತ್ಯುತ್ತಮ ಶಿಕ್ಷಕ’ ಎನ್ನುವುದು. ದೆಹಲಿಯಲ್ಲಿ ಯುವಜನರೆಲ್ಲ ರಾಜಕೀಯ ಬದಲಾವಣೆ ತಂದಿರಬಹುದು. ಯುವಜನರ ಶ್ರಮ ‘ಆಮ್ ಆದ್ಮಿ ಪಾರ್ಟಿ’ಯ ವಿಜಯಕ್ಕೆ ನಾಂದಿಯಾಗಿದೆ. ಆದರೆ ಈ ಯಶಸ್ಸಿನ ಹಿಂದೆ ಅಣ್ಣ ಹಜಾರೆಯಂತಹ ಮುತ್ಸದಿಗಳ ಮಾರ್ಗದರ್ಶನವಿರುವುದು ಸ್ಪಷ್ಟ. ನಮ್ಮ ಯುವ ಜನರು ಸಹ ಹಿರಿಯರ ಮಾರ್ಗದರ್ಶನ ಪಡೆಯುವುದು ಬಹಳ ಮುಖ್ಯ. ‘ಮುಂದೆ ಗುರುವಿದ್ದು ನುಗ್ಗಿದುದು ಧೀರ ಹಿಂಡು’ ಎಂದು ಹೇಳಿರುವ ಕವಿತೆಯ ಸಾಲುಗಳು ನೆನಪಿಗೆ ಬರುತ್ತಿದೆ.

ಯೇಸುವು ಒಬ್ಬ ಗುರುವೂ ಸ್ವಾಮಿಯೂ ಹೌದು. ಅವರ ನೆರಳಿನಲ್ಲಿ ಸಾಗಿದರೆ ಜಯವೂ ನಿಶ್ಚಿತ. ಇಂದಿನ ದಿನಗಳಲ್ಲಿ ಯುವ ಜನತೆಯ ಹಾದಿ ತಪ್ಪಿಸಲು ‘ವಾಣಿಜ್ಯ ಜಗತ್ತು’ ಎಲ್ಲಾ ಸಾಧ್ಯತೆಗಳನ್ನು ಕಂಡುಹಿಡಿದಿದೆ. ಕೊನೆಗೆ ಜಿಗುಪ್ಸೆಗೊಂಡು ಹತ್ಯೆಗೊಳಗಾಗಿರುವ ಯುವ ಜನತೆಯ ಕೈಹಿಡಿಯುವುದು ಯೇಸು ಮಾತ್ರ. ‘ವ್ಯಾಪಾರಿಕರಣಗೊಂಡ ಸುಖ’ದ ಬೆನ್ನತ್ತಿ ಹೋದವರು ಕಿನ್ನತೆಯೆಂಬ ಹಾಸಿಗೆಯಲ್ಲಿ ಮಲಗ ಬೇಕಾಗಿದೆ. ಆದರೆ ಯೇಸು ಗುರುವಿನ ಬೋಧನೆ ಸತ್ಯದ ಹಾದಿ. ಯೇಸುವಿನ ದೈವಿಕ ಮೌಲ್ಯಗಳು ನಿತ್ಯ ಜೀವದ ಬುಗ್ಗೆಯು. ಆದ್ದರಿಂದ ಯೇಸುವಿನಲ್ಲಿ ಯುವ ಜನರ ದೃಷ್ಟಿ ನೆಟ್ಟಿರಲಿ. ಅವರೇ ನಿಮ್ಮ ನಾವೆಯನ್ನು ನಡೆಸಲಿ.

- ಫ್ರ. ರಿಚರ್ಡ್ ಪೈಸ್

 

Copyright ©2014 www.yuvamitra.net.
Powered by eCreators

Home | About | Sitemap | Contact

 

Yuvamitra

Shikshanavani Students

 6364222019

Contact Us

Yuvamitra
Sacred Heart Cathedral Campus
B.H Road
Shivamogga - 577 201
KARNATAKA. INDIA

Land Line: 08182-295090, 400210
E-mail: [email protected]
Web: www.yuvamitra.net
Facebook: yuvamithrashimoga